
ಹಾಗೆಂದು ವರ್ತಮಾನದಲ್ಲಿ ಭೂತಾರಾಧನೆ ಕುಲಗೆಟ್ಟು ಹೋಗಿದೆ. ಕುಣಿಯುತ್ತಿರುವುದು ಭೂತವೋ, ಯಕ್ಷಗಾನದ ಪಾತ್ರವೋ, ನಾಟಕದವನೋ, ದೊಂಬರಾಟದವನೋ ಎಂದು ಅರ್ಥವಾಗದಷ್ಟು ವ್ಯವಸ್ಥೆ ಹಾಳಾಗಿದೆ. ಭೂತಾರಾಧನೆ ದುಡ್ಡಿದ್ದವರ ಒಂದು ಮೆರೆದಾಟದ ಸಮಾರಂಭವಾಗಿ ಹೋಗಿದೆ. ಅನಧಿಕೃತ ಗುತ್ತುಗಳು, ಸ್ವಯಂ ಘೋಷಿತ ಬೀಡುಗಳು, ಲೇಟೆಸ್ಟ್ ಭೂತಗಳು, ಅಂಡಿಗುಂಡಿ ಪ್ರಶ್ನೆಯವರಿಂದ ಭೂತಾರಾಧನೆ ಮತ್ತಷ್ಟು ಕುಲಗೆಟ್ಟು ಹೋಗಿದೆ. ಈ ಹದೆಗೆಟ್ಟಿರುವ ಸಮಯದಲ್ಲಿ ಹಿಂದಿನ ಸಾಂಪ್ರದಾಯಿಕ ಶೈಲಿಯಲ್ಲಿಯೇ ಭೂತ ಕಟ್ಟಿ,ದೈವದ ಬಗ್ಗೆ ಭಯ ಭಕ್ತಿ ಮೂಡಿಸುವ ಕೆಲವೇ ಕೆಲವು ಬೆರಳೆಣಿಕೆಯ ದೈವ ನರ್ತಕರಲ್ಲಿ ಸುಳ್ಯದ ಜಯರಾಮ ಬೊಳಿಯಜಲು ಒಬ್ಬರು. ಭೂತ ಅಂದರೆ ಭೂತ. ಮಾಯವೇ ಕಾಯದೊಳಗೆ ಬಂದು ಅಬ್ಬರಿಸಿದಂತೆ.

ಸುಳ್ಯ ತಾಲೂಕಿನ ಜಯರಾಮ ಬೊಳಿಯಮಜಲು ದಕ್ಷಿಣ ಕನ್ನಡದ ದೈವಾರಾಧನೆಯಲ್ಲಿ ಒಂದು ನೋಟೆಡ್ ಹೆಸರು. ತನ್ನ ಎಳೆಯ ವಯಸ್ಸಿನಲ್ಲಿಯೇ ಗಗ್ಗರ ಕಟ್ಟಿ ಮಾಯವನ್ನು ತನ್ನ ಕಾಯದೊಳಗೆ ಬರಮಾಡಿಕೊಂಡ ಜಯರಾಮರು ಅಲ್ಲಿಂದ ಇಲ್ಲಿ ತನಕ ಸತತ ಬಿಡುವಿಲ್ಲದ ದೈವ ನರ್ತಕರಾಗಿದ್ದಾರೆ. ದಕ್ಷಿಣ ಕನ್ನಡ, ಮಡಿಕೇರಿ, ಮೈಸೂರು ಜಿಲ್ಲೆಯ ಗಡಿಗಳಲ್ಲಿ ಜಯರಾಮರು ಗಗ್ಗರ ಇಟ್ಟರೆಂದರೆ ಜನ ಮಂತ್ರ ಮುಗ್ಧರಾಗಿ ಬಿಡುತ್ತಾರೆ. ದೈವದ ಗಾಂಭೀರ್ಯ, ನುಡಿಕಟ್ಟು,ನರ್ತನ, ಶೈಲಿ,ಅವತಾರ ಹೀಗೆ ಯಾವ ವಿಷಯದಲ್ಲೂ ಜಯರಾಮರ ಭೂತಕ್ಕೆ ಎ ಗ್ರೇಡ್ ಕೊಡಲೇ ಬೇಕು. ದೈವ ನರ್ತನದಲ್ಲಿ ಯಕ್ಷಗಾನದ ಶೈಲಿಯಿಲ್ಲ, ನಾಟಕದ ಡೈಲಾಗ್ ಗಳಿಲ್ಲ, ಪಲ್ಟಿ ಹೊಡೆಯುವುದು,ರಂಬಾರೋಟಿ ಮಾಡುವುದು, ಭಕ್ತರೊಂದಿಗೆ ಉಭಯ ಕುಶಲೋಪರಿ, ಚಿಕ್ಕ ಮಕ್ಕಳನ್ನು ಹಿಡಕ್ಕೊಂಡು ಲಾಲಿ ಹಾಡೋದು ಮುಂತಾದ ಯಾವುದೇ ಅಧಿಕಪ್ರಸಂಗಗಳನ್ನು ಮಾಡದೆ, ತನ್ನ ಭೂತಕ್ಕೆ ತನ್ನದೇ ಗತ್ತು ಗಾಂಭೀರ್ಯ, ರಾಜ ಮರ್ಜಿ, ಹೃದಯದಲ್ಲಿ ಭಕ್ತಿ ಭಾವದ ಸುನಾಮಿ ಎಬ್ಬಿಸುವ ನುಡಿಕಟ್ಟು ಜಯರಾಮರ ಭೂತದ ವಿಶೇಷತೆಗಳು. ಅದ್ಯಾವುದೇ ಭೂತದ ಸಂಧಿಪಾಡ್ಡನಗಳನ್ನು, ನುಡಿಕಟ್ಟುಗಳನ್ನು ಅರಳು ಹುರಿದಂತೆ ಹೇಳಿ ಮುಗಿಸುವ ಜಯರಾಮರ ಪ್ರತೀ ನುಡಿಕಟ್ಟಿಗೂ ಕ್ವಿಂಟಾಲ್ ತೂಕವಿದೆ. ಒಂದು ಮಾತು ಬಾಯಿಂದ ಬಿದ್ದರೆ ಸಾಕು ಅದು ತಲೆಮಾರುಗಳ ತನಕದ ಬುಟ್ಟಿಯಾಗಿ ಬಿಡುತ್ತದೆ.

ಹಾಗೆಂದು ಜಯರಾಮ ಬೊಳಿಯಮಜಲು ಭೂತ ಲೋಕದ ಅಂದಾಜು ಎಲ್ಲಾ ಭೂತಗಳನ್ನೂ ಕಟ್ಟುವಷ್ಟು ಪಾಂಡಿತ್ಯ ಹೊಂದಿದವರಾಗಿದ್ದಾರೆ. ಅದು ಕಲ್ಲುರ್ಟಿಯಿಂದ ಹಿಡಿದು ಉಳ್ಳಾಕುಲು, ಕೊಡಮಣಿತ್ತಾಯನ ತನಕ ಜಯರಾಮರು ಪ್ರವೀಣರು. ತನ್ನ ಜೀವೀತಾವಧಿಯ ಮಧ್ಯವಯಸ್ಸಿನಲ್ಲೇ ಜಯರಾಮ ಬೊಳಿಯಮಜಲು ಸಾಂಪ್ರದಾಯಿಕ ದೈವ ಪರಂಪರೆಗೆ ಕಟ್ಟಿ ಪಾಯ ಹಾಕಿದವರು. ಅತೀ ಎಳೆಯ ವಯಸ್ಸಿನಲ್ಲಿಯೇ ದೈವನರ್ತನೆಯನ್ನೇ ತನ್ನ ಬದುಕಿನ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡ ಜಯರಾಮ ಅದಕ್ಕೊಂದು ನ್ಯಾಯ ದೊರಕಿಸುವಲ್ಲಿ ಪಟ್ಟ ಪರಿಶ್ರಮ ಅವಿಸ್ಮರಣೀಯವಾದುದು. ಕೇವಲ ದುಡ್ಡಿನ ಆಸೆಗೆ ಪಲ್ಟಿ ಹೊಡೆಯದೆ, ಯಕ್ಷಗಾನದ ಶೈಲಿಯಲ್ಲಿ ಕುಣಿಯದೆ ದೈವ ನರ್ತನೆಯಲ್ಲಿ ತನ್ನದೇ ರಾಜ ಮರ್ಜಿ ರೂಪಿಸಿದ ಜಯರಾಮರು ನರ್ತನೆಯಲ್ಲಿ ದಣಿವರಿಯದವರು. ನರ್ತನ ಅಂದರೆ ಭೂತದ್ದೇ ನರ್ತನ, ವರ್ತನೆ ಅಂದರೆ ವರ್ತನೆ.ಮಾತುಗಳು ಅಂದರೆ ಭೂತದ್ದೇ ನುಡಿಕಟ್ಟು.ಭೂತದ್ದೇ ಶೈಲಿ ಮತ್ತು ಭೂತದ್ದೇ ದೃಷ್ಟಿ.
ಜಯರಾಮ ಬೊಳಿಯಮಜಲು ಅವರ ನಿರಂತರ ದೈವನರ್ತನ ಸೇವೆಗೆ ಹಲವಾರು ಸಂಘ ಸಂಸ್ಥೆಗಳು, ಸಂಘಟನೆಗಳು ಅವರನ್ನು ಕರೆದು ಸನ್ಮಾನ ಮಾಡಿವೆ, ಶಾಲು ಹೊದೆಸಿವೆ, ಪ್ರಶಸ್ತಿ ಫಲಕಗಳ ಪ್ರಧಾನ ಮಾಡಿವೆ, ಹಾಡಿ ಹೊಗಳಿವೆ. ಸದ್ಯಕ್ಕೆ ಸುಳ್ಯ ತಾಲೂಕಿನ ಟಾಪ್ ದೈವ ನರ್ತಕರಲ್ಲಿ ಒಬ್ಬರಾಗಿರುವ ಜಯರಾಮ ಬೊಳಿಯಮಜಲು ಅವರ ವೃತ್ತಿ ನಿಷ್ಠೆ, ದೈವ ನಿಷ್ಠೆ ಶ್ಲಾಘನೀಯವಾದುದು. ದೈವ ನರ್ತನದಲ್ಲಿ ಮಾಯವನ್ನು ಕಾಯಕ್ಕೆ ಇಳಿಸಿ ಅದನ್ನು ಸಂಭಾಳಿಸುವುದು, ಸಹಿಸಿಕೊಳ್ಳುವುದು, ಟ್ಯಾಕಲ್ ಮಾಡೋದು ಮತ್ತು ವಾಪಾಸ್ ಕಾಯದಿಂದ ಮಾಯವನ್ನು ಕಳಿಸಿಕೊಡೋದು ಚಿಕ್ಕ ಮಾತೇನಲ್ಲ. ಅದಕ್ಕೆ ಗಟ್ಟಿಗುಂಡಿಗೆ ಬೇಕು, ತಾಕತ್ತ್ ಬೇಕು. ಬಹುಶಃ ಜಯರಾಮರ ನೇಮದಲ್ಲಿ ಖುದ್ದು ಮಾಯವೇ ಇಳಿದು ಜಯರಾಮರ ಕಾಯದೊಳಗೆ ಬಂದು ಸ್ಥಾಪಿತವಾಗಿ ಬಿಡುತ್ತದೆ.
ಭೂತ ಕಾಲದಲ್ಲಿ ಭೂತಗಳು ವಿಜೃಂಭಿಸಿದ್ದವು. ಅದಕ್ಕೆ ಕಾರಣ ಭೂತಗಳಿಗೂ ಒಂದು ಫ್ರೊಟೋಕಾಲ್ ಇತ್ತು. ನಾಲ್ಕೂರಿಗೆ ಒಂದು ಬೀಡು, ಊರಿಗೆ ಒಂದು ಗುತ್ತು, ಒಬ್ಬನೇ ಯಜಮಾನ ಮತ್ತು ಊರಿನ ದೈವನರ್ತಕ ಕುಟುಂಬ. ಈಗ ಸ್ವಯಂ ಘೋಷಿತ ಗುತ್ತುಗಳು, ಅದರ ಸ್ವಯಂ ಘೋಷಿತ ಯಜಮಾನರು, ಕಟ್ಟುಕಟ್ಟಳೆಗಳೇ ಗೊತ್ತಿಲ್ಲದ ಪರಿಚಾರಕರು ಮತ್ತು ದೈವನರ್ತನೆಯ ಗಂಧಗಾಳಿಯೂ ಗೊತ್ತಿಲ್ಲದ ನರ್ತಕರು. ಈ ಪರಿಸ್ಥಿತಿಗೆ ಮಾಯ ಕಾಯಕ್ಕೆ ಇಳಿದು ಬರುವುದಾದರೂ ಹೇಗೆ. ವರ್ತಮಾನದಲ್ಲಿ ಭೂತಗಳು ಬೋರ್ ಹೊಡೆಯುತ್ತಿದೆ. ಇನ್ನು ಭವಿಷ್ಯತ್ ನ ಭೂತಗಳಿಗೆ ಭೂತವೇ ಗತಿ. ಆದರೆ ಇದಕ್ಕೆ ಹೊರತಾಗಿ ಜಯರಾಮ ಬೊಳಿಯಮಜಲು ಅವರ ಭೂತ ಇದೆ. ಭೂತದಿಂದ ಬೆಳೆದು ಬಂದ ಜಯರಾಮ ಬೊಳಿಯಮಜಲು ಅವರ ಭೂತ ಈಗ ವರ್ತಮಾನದಲ್ಲಿ ವಿಜೃಂಭಿಸುತ್ತಿದೆ. ಮುಂದೆ ಭವಿಷ್ಯತ್ ನಲ್ಲೂ ಮುಂದಿನ ಪೀಳಿಗೆಗೆ ನಾಂದಿ ಹಾಡಲಿ ಎಂಬುದು ದೈವಭಕ್ತರ ಆಶಯ.

