
ಬೆಳ್ತಂಗಡಿಯಲ್ಲಿ ವಿಕಲಚೇತನರ ಹೆಸರಿನಲ್ಲಿ ಮಂಜೂರಾಗಿದ್ದ ನ್ಯಾಯಬೆಲೆ ಅಂಗಡಿಯನ್ನು ಮುಕ್ಕಲು ಶೆಟ್ರು ಮಡಿವಾಳರ ರೇಷನ್ ಕಾರ್ಡಿನಲ್ಲಿ ಎಂಟ್ರಿ ಹಾಕಿದ ವಿಲಕ್ಷಣ ಘಟನೆ ನಡೆದಿದೆ. ಇದಕ್ಕೆ ಬೆಳ್ತಂಗಡಿ ಆಹಾರ ಇಲಾಖೆಯ ಅಧಿಕಾರಿಗಳ ಹಿನ್ನೆಲೆ ಸಂಗೀತವಿದ್ದು ದೂರು ಜಿಲ್ಲಾ ಕಲೆಕ್ಟರನ ಟೇಬಲ್ ಮುಟ್ಟಿದೆ. ಇದೊಂಥರ ಪಕ್ಷಾಂತರ ಮಾಡಿದ ಹಾಗೆ ಜಾತ್ಯಾಂತರ. ಆಚೆ ಹಾರುವುದು ಮತ್ತು ಕೆಲಸ ಆದ ಮೇಲೆ ಈಚೆ ಹಾರುವುದು.
ಅಲ್ಲಿ ಬೆಳ್ತಂಗಡಿ ತಾಲೂಕಿನ ಮದ್ದಡ್ಕ ಎಂಬಲ್ಲಿ ಉಪ್ಪಡ್ಕದ ಶೆಟ್ರೊಬ್ಬರು ತನ್ನ ಬಿಲ್ಡಿಂಗಿನಲ್ಲೇ ಒಂದು ಪಡಿತರ ವಿತರಣೆಯ ನ್ಯಾಯಬೆಲೆ ಅಂಗಡಿಯೊಂದನ್ನು ನಡೆಸಿಕೊಂಡು ಬರುತ್ತಿದ್ದು ಈ ಅಂಗಡಿ ಈಗ ದೊಡ್ಡ ಸುದ್ದಿಯಾಗಿದೆ. ಈ ಅಂಗಡಿ ಓಡಿಲ್ನಾಳ ಗ್ರಾಮದ ಕೋಡಿಬೆಟ್ಟು ತ್ಯಾಂಪಣ್ಣ ಮಡಿವಾಳರ ಮಗಳು ನಿಕ್ಷಿತಾ ಹೆಸರಿನಲ್ಲಿ ಮಂಜೂರಾಗಿದ್ದು ಸದ್ರಿ ಹುಡುಗಿ ವಿಕಲಚೇತನಳಾಗಿದ್ದುದರಿಂದ ಮಡಿವಾಳರ ಫ್ಯಾಮಿಲಿಯನ್ನು ಯಾಮಾರಿಸಿ ಉಪ್ಪಡ್ಕದ ಶೆಟ್ರು ತನ್ನ ಹೆಂಡ್ತಿಯ ಮುಖಾಂತರ ಈ ಅಂಗಡಿ ನಡೆಸುತ್ತಿದ್ದರು. ಶುರು ಶುರುವಿಗೆ ಸರಿ ಇದ್ದ ಶೆಟ್ರಿಗೆ ಆಮೇಲೆ ಶುರುವಾಗಿದೆ. ಇದನ್ನರಿತ ನಿಕ್ಷಿತಾ ಮನೆಯವರು ಮುಣು ಮುಣು ಶುರು ಮಾಡಿದಾಗ ಶೆಟ್ರು ಉಪಾಯವಾಗಿ ವಿಕಲಚೇತನ ಹುಡುಗಿಯ ಚೆಕ್ ಬುಕ್ ತಗೊಂಡು, ಎಲ್ಲಾ ಹಾಳೆಗಳಿಗೂ ಹುಡುಗಿಯ ಸಹಿ ತಗೊಂಡು ಡೈರೆಕ್ಟ್ ಕ್ಯಾಶ್ ಡ್ರಾ ಮಾಡಿ ಕಿಸೆಗೆ ಹಾಕಲು ಶುರು ಮಾಡಿದ್ದರು. ಇದರಿಂದಾಗಿ ನಿಕ್ಷಿತಾ ಮನೆಯವರಿಗೆ ನ್ಯಾಯಬೆಲೆ ಅಂಗಡಿ ಮೇಲಿದ್ದ ಹಿಡಿತ ಸಂಪೂರ್ಣ ತಪ್ಪಿ ಹೋಗುತ್ತದೆ.

ಹಾಗೆ ವಿಕಲಚೇತನ ಹುಡುಗಿಯ ಅಂಗಡಿ ಮತ್ತು ಚೆಕ್ ಹಾಳೆಗಳ ದುರುಪಯೋಗ ನಿಕ್ಷಿತಾಳನ್ನು ಶೆಟ್ರ ವಿರುದ್ಧ ತಿರುಗಿ ಬೀಳುವಂತೆ ಮಾಡುತ್ತದೆ. ನಿಕ್ಷಿತಾ ತನ್ನ ಅಂಗಡಿಯ ಯಾವುದೇ ವಹಿವಾಟಿಗೆ ತಂಬು ಕೊಡುವುದನ್ನು ನಿಲ್ಲಿಸಿ ಬಿಡುತ್ತಾಳೆ. ಇದರಿಂದ ಕಂಗಾಲಾದ ಉಪ್ಪಡ್ಕದ ಶೆಟ್ರು ಬೆಳ್ತಂಗಡಿಯ ಆಹಾರ ಇಲಾಖೆಯ ಅಧಿಕಾರಿಗಳಿಗೆ ಬಡಿಸಿ ಕೋಡಿಬೆಟ್ಟು ತ್ಯಾಂಪಣ್ಣ ಮಡಿವಾಳರ ಹೆಂಡ್ತಿ, ನಿಕ್ಷಿತಾ ತಾಯಿ ಅಮಿತಾ ಹೆಸರಿನಲ್ಲಿದ್ದ ಬಿಪಿಎಲ್ ಪಡಿತರ ಚೀಟಿಗೆ ತನ್ನ ಹೆಂಡ್ತಿ ಹೆಸರನ್ನು ಅಮಿತಾ ಸಿಸ್ಟರ್ ಎಂದು ಸೇರಿಸಿ ವ್ಯವಹಾರ ಅನಧಿಕೃತವಾಗಿ ಮುಂದುವರೆಸಿದ್ದರು. ಇದರಿಂದಾಗಿ ಶೆಟ್ರ ಹೆಂಡ್ತಿ ನಿಕ್ಷಿತಾ ಫ್ಯಾಮಿಲಿ ಮೆಂಬರ್ ಆದ ಕಾರಣ ತಂಬು ತುಂಬು ಹೃದಯದಿಂದ ಓಕೆ ಆಗಿ ಬಿಟ್ಟಿತ್ತು. ಶೆಟ್ರು ಹೀಗೆ ತನ್ನ ಅನಧಿಕೃತ ವ್ಯವಹಾರ ಮುಂದುವರೆಸುತ್ತಾ ಹೋಗುತ್ತಿದ್ದರು.
ಹಾಗೆ ಉಪ್ಪಡ್ಕದ ಉಪ್ಪಡಚ್ಚಿರ್ ಇಷ್ಟೆಲ್ಲಾ ಕೆಲಸ ಮಾಡಿದೆ ಎಂದು ಮಡಿವಾಳರ ಕುಟುಂಬಕ್ಕೆ ತಿಳಿದಿರಲಿಲ್ಲ. ಆದರೆ ಯಾವಾಗ ಮಡಿವಾಳ ಕುಟುಂಬದ ಸದಸ್ಯರೊಬ್ಬರು ಉದ್ಯೋಗಕ್ಕಾಗಿ ಫಾರಿನ್ ಗೆ ಹೊರಟು ನಿಂತಾಗ ಉಪ್ಪಡ್ಕದ ಉಪ್ಪಡಚ್ಚಿರ್ ಮಾಡಿದ ಕೆಲಸ ಹೊರಗೆ ಬಂದಿದೆ. ಫಾರಿನ್ ಗೆ ಹೊರಟವರು ತಮ್ಮ ರೇಷನ್ ಕಾರ್ಡ್ ಪರಿಶೀಲಿಸಲಾಗಿ ಅದರಲ್ಲಿ ಏನೋ ದೋಷ ಕಂಡುಬಂದಿದೆ. ಈ ಬಗ್ಗೆ ಆಹಾರ ಇಲಾಖೆಯಲ್ಲಿ ವಿಚಾರಿಸಲಾಗಿ ಅವರ ರೇಷನ್ ಕಾರ್ಡಿಗೆ ಬಿನ್ನೆದಿ ಒಬ್ಬಳು ಬಂದು ಟೆಂಟ್ ಹಾಕಿರುವ ಬಗ್ಗೆ ಗೊತ್ತಾಗಿದೆ. ಬಿನ್ನೆರ್ ಯಾರು ಎಂದು ನೋಡಲಾಗಿ ಅದು ಉಪ್ಪಡ್ಕದ ಭಯಂಕರ ನಾಯಕನ ಹೆಂಡ್ತಿ ಎಂದು ಗೊತ್ತಾಗಿದೆ. ಇದೀಗ ಈ ನ್ಯಾಯಬೆಲೆ ಅಂಗಡಿಯ ಲೈಸೆನ್ಸ್ ರದ್ದಾಗಿದ್ದು, ಉಪ್ಪಡ್ಕದ ಉಪ್ಪಡಚ್ಚಿರ್ ಮಾಡಿರುವ ಪೋರ್ಜರಿ ಬಗ್ಗೆ ಜಿಲ್ಲಾ ಕಲೆಕ್ಟರನಿಗೆ ದೂರು ನೀಡಲಾಗಿದೆ ಎಂದು ತಿಳಿದುಬಂದಿದೆ. ಹಾಗೆಂದು ಈ ಉಪ್ಪಡ್ಕದ ದೇಶಭಕ್ತನ ಬಗ್ಗೆ ಬೆಳ್ತಂಗಡಿಯಲ್ಲಿ ಅನೇಕ ದಂತಕತೆಗಳಿದ್ದು ಒಬ್ಬ ತಾಲೂಕು ಪಂಚಾಯಿತಿ ಸದಸ್ಯನಾಗಿ ಸದನವನ್ನು ಅಲುಗಾಡಿಸಿದ ಹೆಗ್ಗಳಿಕೆ ಇದೆ. ಒಂದು ಪೊಟ್ಟು ಬೀದಿ ದೀಪದ ಬಗ್ಗೆ, ಒಂದು ಆಂಟುಮೊಂಟು ಮೋರಿಯ ಬಗ್ಗೆ ಸದನದಲ್ಲಿ ದಿನಗಟ್ಟಲೆ, ವಾರಗಟ್ಟಲೆ ಮಾತಾಡಿದ ಒಳ್ಳೇಯ ಸಂಸದೀಯ ಪಟು ಇವರು. ಮಾರ್ಗದ ಡಾಮಾರಿನ ಬರಿಯಲ್ಲಿಯೇ ಮನೆ ಕಟ್ಟಿ, ಓಡಿಲ್ನಾಳ ದೇವಸ್ಥಾನದ ಟ್ರಸ್ಟಿಯಾಗಿ ಇವರು ಮಾಡಿದ ಸಮಾಜ ಸೇವೆಯನ್ನು ದೇವರು ಕೂಡ ಇವತ್ತಿಗೂ ನೆನಪಿನಲ್ಲಿಟ್ಟುಕೊಂಡಿದ್ದಾರೆ. ಭಟ್ರು ಹೇಳುವ ಮಂತ್ರಕ್ಕೂ ಸೆನ್ಸಾರ್ ಮಾಡಿದ ಇವರ ಧಾರ್ಮಿಕ ಸೇವೆ ಶ್ಲಾಘನೀಯವಾದುದು. ಇದೀಗ ವಿಕಲಚೇತನರ ಹೆಸರಿನ ನ್ಯಾಯಬೆಲೆ ಅಂಗಡಿಯನ್ನು ಮುಕ್ಕಲು ಹೊರಟಿರುವ ಇವರ ಮಾಸ್ಟರ್ ಪ್ಲಾನ್ ಅಂತೂ ಬೆಳ್ತಂಗಡಿಯ ರಾಜಕೀಯ ಇತಿಹಾಸದಲ್ಲಿ ಅಜರಾಮರವಾಗಿ ಉಳಿಯುವಂತದ್ದು. ಬೆಳ್ತಂಗಡಿ ಬಿಜೆಪಿಗರು ಹೇಗೆ ಸಹಿಸಿಕೊಂಡಿದ್ದಾರೋ ಅವರಿಗೇ ಗೊತ್ತು.

ಹಾಗೆಂದು ಸದ್ರಿ ಕೇಸಲ್ಲಿ ಆಹಾರ ಇಲಾಖೆಯ ಅಧಿಕಾರಿಗಳ ಅಜನೆ ಇದ್ದೇ ಇದೆ. ಒಂದು ಪಡಿತರ ಚೀಟಿ ಅಂದರೆ ಅದು ಒಂದು ಕುಟುಂಬಕ್ಕೆ ಸಂಬಂಧ ಪಟ್ಟ ದಾಖಲೆಯಾಗಿದೆ. ಕುಟುಂಬಿಕರನ್ನು ಮತ್ತು ರಕ್ತ ಸಂಬಂಧಿಗಳನ್ನು ಮಾತ್ರ ಒಂದು ಪಡಿತರ ಚೀಟಿಗೆ ಸೇರ್ಪಡೆಗೊಳಿಸ ಬಹುದು. ಆದರೆ ಬೆಳ್ತಂಗಡಿಯಲ್ಲಿ ನಡೆದಿದ್ದೇನು? ಕುಟುಂಬವೇ ಅಲ್ಲದ, ಜಾತಿಯೂ ಅಲ್ಲದ, ಬಜಿಲ್ ಹಾಕುವ ಸಂಬಂಧವೂ ಇಲ್ಲದ, ಕುಲೆಗಳಿಗೆ ಬಡಿಸುವ ಲಿಸ್ಟಿನಲ್ಲೂ ಇರದ ಉಪ್ಪಡ್ಕನ ಹೆಂಡ್ತಿಯನ್ನು ಅಮಿತಕ್ಕೆಯ ಬಿಪಿಎಲ್ ನಲ್ಲಿ ಇದೇ ಬೆಳ್ತಂಗಡಿ ಆಹಾರ ಇಲಾಖೆಯ ಅಧಿಕಾರಿಗಳು ಸೇರಿಸಿ ಒಂದು ಎಲೆ ಇಂಚಿ ಎಳೆದಿದ್ದಾರೆ. ಇದೊಂದು ನಕಲಿ ದಾಖಲೆ ಸೃಷ್ಟಿಸಿ ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ಮಿಸ್ ಯೂಸ್ ಮಾಡುವ ಮಾಸ್ಟರ್ ಪ್ಲಾನ್ ಆಗಿದೆ. ಇಲ್ಲಿ ಅನ್ನಭಾಗ್ಯ ಯೋಜನೆಯ ದುರುಪಯೋಗ ಆಗಿರುವುದು ಸ್ಪಷ್ಟವಾಗಿದೆ. ಬೆಳ್ತಂಗಡಿ ದೇಶಭಕ್ತರ ಟೀಮಿಗೆ ಇಷ್ಟೊಂದು ಡ್ಯಾಮೇಜ್ ಮಾಡಿರುವ ಉಪ್ಪಡ್ಕನ ವಿರುದ್ಧ ಇಲ್ಲಿ ತನಕ ಯಾರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇಲ್ಲಿ ಇಷ್ಟು ದೊಡ್ಡ ಬಿಪಿಎಲ್ ಫ್ರಾಡ್ ನಡೆದಿದ್ದರೆ ಎಲ್ಲಿ ಹೋಗಿದ್ದಾರೆ ಎಲ್ಲಾ? ಐಪಿಎಲ್ ಗೆ ಬಾಲ್ ಹೆಕ್ಕಲು ಹೋಗಿದ್ದಾರಾ?

