ಸುಬ್ರಹ್ಮಣ್ಯದಲ್ಲಿ ಅನಧಿಕೃತ ಪೂಜೆಗಳು!

Pattler News

Bureau Report

ರಾಜ್ಯದ ನಂಬರ್ ವನ್ ದೇವರು ಸುಬ್ರಹ್ಮಣ್ಯನ ಹೆಸರಿನಲ್ಲಿ ಸುಬ್ರಹ್ಮಣ್ಯದಲ್ಲಿ ಅನಧಿಕೃತ ಪೂಜೆಗಳ ಹಾವಳಿ ಮಿತಿಮೀರಿದ್ದು, ದೇವರ ನಾಮದಲ್ಲಿ ಧಾರ್ಮಿಕ ಡಕಾಯಿತಿ ನಿರಂತರವಾಗಿದ್ದು ಇಲ್ಲಿ ಧಾರ್ಮಿಕ ಮಾಫಿಯಾ ಬೆಳೆಯಲು ವಿಪುಲ ಅವಕಾಶಗಳಿವೆ ಎಂದು ತಿಳಿದುಬಂದಿದೆ. ಒಂದು ಲೆವೆಲ್ ತನಕ ಇರಬೇಕು ಮಾರಾಯ್ರೆ, ಸುಬ್ರಹ್ಮಣ್ಯದಲ್ಲಿ ಇದೆಂಥ?

ಹಾಗೆಂದು ಸುಬ್ರಹ್ಮಣ್ಯದಲ್ಲಿ ಪೂಜೆಯಲ್ಲಿ ಎರಡು ವಿಧಗಳಿವೆ. ಒಂದು ಅಧಿಕೃತ ಪೂಜೆ, ಇನ್ನೊಂದು ಅನಧಿಕೃತ ಪೂಜೆ. ಅಧಿಕೃತ ಪೂಜೆ ಅಂದರೆ ಸುಬ್ರಹ್ಮಣ್ಯನ ಆಲಯದ ಕಚೇರಿಯಿಂದ ಚೀಟಿ ಮಾಡಿ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿಯಲ್ಲಿಯೇ ಅಧಿಕೃತ ವೈದಿಕರ ಮುಖಾಂತರ ನಡೆಸುವ ಪೂಜೆ. ಈ ಪೂಜೆಯ ರಿಸಲ್ಟ್ ಹಂಡ್ರೆಡ್ ಪರ್ಸೆಂಟ್ ಗ್ಯಾರಂಟಿ. ಈ ಪೂಜೆಗೆ ನೀವು ಮಾಡಿಸಿದ ಚೀಟಿ ದುಡ್ಡು ದೇವಸ್ಥಾನದ ವಿನಿಯೋಗಕ್ಕೆ, ಧಾರ್ಮಿಕ ಚಟುವಟಿಕೆಗಳಿಗೆ ಉಪಯೋಗಿಸಲ್ಪಡುತ್ತದೆ. ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಮುಂತಾದ ಅತೀ ಮುಖ್ಯದರಲ್ಲಿ ಮುಖ್ಯ ಪೂಜೆಗಳು ಸುಬ್ರಹ್ಮಣ್ಯನಿಗೆ ಡೈರೆಕ್ಟ್ ರೀಚ್ ಆಗಬೇಕಿದ್ದರೆ ಸುಬ್ರಹ್ಮಣ್ಯದಲ್ಲಿ ಅಧಿಕೃತ ಪೂಜೆ ಮಾಡಿಸಲೇ ಬೇಕು. ಇಲ್ಲದಿದ್ದರೆ ನೀವು ಸುಬ್ರಹ್ಮಣ್ಯದಲ್ಲಿ ಮಾಡಿಸಿದ ಯಾವ ಪೂಜೆ ಪುನಸ್ಕಾರವೂ ಎಂಕು ಪಣಂಬೂರಿಗೆ ಹೋಗಿ ಬಂದ ಹಾಗೆ.

ಇನ್ನು ಸುಬ್ರಹ್ಮಣ್ಯದಲ್ಲಿ ಚಾಲ್ತಿಯಲ್ಲಿರುವ ಎರಡನೇ ಪೂಜಾ ಸಿಸ್ಟಂ ಅಂದರೆ ಅನಧಿಕೃತ ಪೂಜೆಗಳು. ಈ ಪೂಜೆಗಳಿಗೂ ಸುಬ್ರಹ್ಮಣ್ಯನ ಆಲಯಕ್ಕೂ ಯಾವುದೇ ಸಂಬಂಧಗಳಿಲ್ಲ. ರಿಟೈರ್ಡ್ ವೈದಿಕರು, ದೇವಸ್ಥಾನದಿಂದ ಕಿಕೌಟ್ ಆದವರು, ದೇವಸ್ಥಾನದಲ್ಲಿ ಇದ್ದೇ ಸೈಡ್ ಬಿಸಿನೆಸ್ ಮಾಡುವವರು, ಸಾಲ ಮಾಡಿ ಮುಳುಗಲು ರೆಡಿ ಆದವರು, ಬೊಳ್ಳಕ್ಕೆ ಹೊರಟವರು, ಪ್ರೊಬೆಶನರಿ ವೈದಿಕರು ಮತ್ತು ದುಡ್ಡು ಮಾಡಲೆಂದೇ ಸುಬ್ರಹ್ಮಣ್ಯಕ್ಕೆ ಬಂದವರು ಇಂಥಹ ಅನಧಿಕೃತ ಪೂಜೆಗಳ ಪ್ರೊಡ್ಯೂಸರ್ ಗಳು ಮತ್ತು ಡೈರೆಕ್ಟರ್ ಗಳು. ಅಮಾಯಕ ಭಕ್ತರನ್ನು ಯಾಮಾರಿಸಿ, ಅವರನ್ನು ಇಂಗ್ಲೆಂಡಿನ ಮಂಗ ಮಾಡಿ, ಕುಮಾರಧಾರನ ಸಂಕದ ಈಚೆ ಎಲ್ಲಿ ಪೂಜೆ ಮಾಡಿದರೂ ಸುಬ್ರಹ್ಮಣ್ಯನಿಗೆ ಸಲ್ಲುತ್ತದೆ ಎಂದು ನಂಬಿಸಿ ಭಕ್ತರನ್ನು ದೋಚಿ, ಅವರು ತಂದಿದ್ದ ದುಡ್ಡೆಲ್ಲವನ್ನೂ ಎಳೆದು ಕೊಂಡು ಅವರನ್ನು ಬಸ್ ಹತ್ತಿಸುವ ಕೆಲಸ ಇಂಥವರಿಂದ ನಡೆಯುತ್ತಿದೆ. ಈಗೀಗ ಪರಿಸ್ಥಿತಿ ಎಲ್ಲಿಗೆ ಬಂದು ಮುಟ್ಟಿದೆ ಅಂದರೆ ಈ ಅನಧಿಕೃತ ವೈದಿಕರು ಆನ್ ಲೈನಲ್ಲೂ ಸುಬ್ರಹ್ಮಣ್ಯನ ಟ್ರೇಡಿಂಗ್ ಶುರು ಮಾಡಿದ್ದಾರೆ ಎಂದು ತಿಳಿದುಬಂದಿದೆ. ದೇವಸ್ಥಾನದಿಂದ ಕಮ್ಮಿಯಲ್ಲಿ ಮಾಡಿಕೊಡುತ್ತೇವೆ, ಕಡಿಮೆ ಟೈಮಲ್ಲಿ ಪೂಜೆ, ನೋ ರಶ್, ಪರಿಣತ ವೈದಿಕರು, ಊಟ ವಸತಿ ಫ್ರೀ ಎಂದೆಲ್ಲಾ ಭಕ್ತರನ್ನು ಮಂಗ ಮಾಡಿ ಮುಣು ಮುಣು ಮಂತ್ರ ಹೇಳಿ, ಸುಮ್ಮನೆ ಮಾಸ್ಕಿಟೋ ಕಾಯಿ ಪುಗೆ ಎಬ್ಬಿಸಿ ಪೂಜೆ ಮುಗಿಸಿ ಬಿಡುತ್ತಿರುವುದು ಈಗ ಸುಬ್ರಹ್ಮಣ್ಯದಲ್ಲಿ ಮಾಮೂಲಾಗಿದೆ. ಇಂಥ ಪೂಜೆಗಳಿಂದ ಭಕ್ತರಿಗೂ ಏನು ಪ್ರಯೋಜನ ಇಲ್ಲ, ದೇವರಿಗೂ ಏನೂ ಪ್ರಯೋಜನವಿಲ್ಲ. ಪ್ರೊಡ್ಯೂಸರ್ ಗಳ ಮತ್ತು ಡೈರೆಕ್ಟರ್ ಗಳ ಕಿಸೆ ತುಂಬಿ ತುಳುಕುತ್ತದೆ ಅಷ್ಟೇ.

ಇದೀಗ ಸುಬ್ರಹ್ಮಣ್ಯದಲ್ಲಿ ಇಂಥ ಅಂಡಿಗುಂಡಿ ಪೂಜಾ ಸೆಂಟರ್ ಗಳು ಅಣಬೆಗಳಂತೆ ಏಳುತ್ತಿದೆ. ಇದು ಭಾರೀ ಅಪಾಯಕಾರಿ ಬೆಳವಣಿಗೆ.ಎಲ್ಲಾ ಬಿಟ್ಟು ಕಾಶಿ ಹೊರಟವನೂ ಸುಬ್ರಹ್ಮಣ್ಯ ದ್ವಾರದ ತನಕ ಬಂದು ಮನ ಪರಿವರ್ತನೆಗೊಂಡು ವಾಪಾಸ್ ಹೋಗಿ ಇಂಥ ಅಂಡಿಗುಂಡಿ ಪೂಜಾ ಸೆಂಟರ್ ಓಪನ್ ಮಾಡಿದ ದುಡ್ಡು ಮಾಡುತ್ತಿರುವ ಉದಾಹರಣೆಗಳಿವೆ. ಇನ್ನು ಅಲ್ಲಿ ಸುಜ್ಞಾನ ಮಂದಿರದಲ್ಲಿ ಅನಧಿಕೃತ ಪೂಜೆಗಳು ನಡೆಯುತ್ತಿರುವ ಬಗ್ಗೆ ಶೂಟಿಂಗ್ ಆಗಿದ್ದು ಫಲಾನುಭವಿಗಳ ಲಿಸ್ಟ್ ಹೊರಗೆ ಬಂದಿದೆ. ಮತ್ತೆ ಆಚೆ ಕಡೆ ಶಾರದಾ ಮಂದಿರದಲ್ಲೂ ಒಂದು ಪ್ರೊಬೆಶನರಿ ತಂಡ ಭಕ್ತರನ್ನು ಬುಕ್ ಮಾಡುತ್ತಿರುವ ಬಗ್ಗೆ ಮಾಹಿತಿ ಇದೆ. ಇನ್ನು ಶಿವ ಸದನದಲ್ಲಿ ಕೂಡ ಕಚ್ಚೆ, ಪುಗೆ ಗೋಚರಿಸುತ್ತಿದೆ. ಇವೆಲ್ಲಕ್ಕಿಂತಲೂ ಅಪಾಯಕಾರಿ ಬೆಳವಣಿಗೆ ಅಂದರೆ ಗ್ಯಾರೇಜ್ ಒಂದರಲ್ಲಿ ಅಮಾಯಕ ಭಕ್ತರನ್ನು ಬೋಳಿಸುವ ಕೆಲಸ ಶುರು ಮಾಡಿದ್ದು. ರನ್ನಿಂಗ್ ಇದ್ದ ಗ್ಯಾರೇಜ್ ಬಂದ್ ಮಾಡಿ ಪೂಜೆ ಲಾಭದಾಯಕ ಉದ್ಯಮ ಎಂದು ಅನಧಿಕೃತ ಪೂಜೆ ಶುರುಮಾಡಿದ್ದು ಧಾರ್ಮಿಕ ಡಕಾಯಿತರ ಮನಸ್ಥಿತಿ ಎಂತದ್ದು ಎಂಬುದು ಅರ್ಥವಾಗುತ್ತದೆ. ಇನ್ನು ಇದಕ್ಕಿಂತಲೂ ಇಂಪಾರ್ಟೆಂಟ್ ಪೂಜೆ ಕಾಶಿಕಟ್ಟೆ ಬಳಿ ಲಾಡ್ಜೊಂದರ ಕಾರ್ ಪಾರ್ಕಿಂಗ್ ನಲ್ಲಿ ನಡೆದ ಅಂಡಿಗುಂಡಿ ಪೂಜೆ. ಇಲ್ಲಿ ಪೂಜೆ ಮಾಡಲೇ ಬೇಕಾದ ಅನಿವಾರ್ಯತೆಗೆ ಬಿದ್ದಿದ್ದಾರೆ ಪೂಜೆ ಪ್ರೊಡ್ಯೂಸರ್ ಗಳು. ಕುದಿಗೆ ಕಟ್ಟಬೇಕು, ಬಡ್ಡಿ ಕಟ್ಲಿಕ್ಕೆ ಉಂಟು, ವಿವಿಧ ಕಂತುಗಳು ಬಾಕಿ ಇತ್ಯಾದಿ ಇತ್ಯಾದಿ. ಇನ್ನು ಅಲ್ಲಿ ಅಡಿಗೆ ಶಿವಣ್ಣನ ಮನೆಯಲ್ಲಿ ಕೂಡ ಭಕ್ತರನ್ನು ಬೋಳಿಸಿ ಮೂರ್ನಾಮ ಹಾಕಿಸಿ ಸುಖ ಸಂತೋಷದಿಂದ ಕಳಿಸಿ ಕೊಡಲಾಗುತ್ತಿದೆ. ಮತ್ತೆ ಆಚೆ ಯಾಗ ಶಾಲೆಯಲ್ಲಿ ಸರ್ವರ್ ಏಸ ಭಟ್ಟರು ಕೂಡ ಒಂದು ಹೋಮ ಕುಂಡ ಇಟ್ಟುಕೊಂಡಿರುವ ಬಗ್ಗೆ ತಿಳಿದು ಬಂದಿದೆ. ಹಾಗೆಂದು ಅಮಾಯಕ ಭಕ್ತರೇ ಇವರೆಲ್ಲರ ಟಾರ್ಗೆಟ್. ದಿನಾ ಟಾರ್ಗೆಟ್ ರೀಚ್ ಆಗುತ್ತಲೇ ಇರುತ್ತಾರೆ ಮತ್ತು ಕಿಸೆ ತುಂಬಿ ತುಳುಕಾಡುತ್ತಲೇ ಇರುತ್ತದೆ. ಈ ಬಗ್ಗೆ ದೇವರ ಆಡಳಿತ ಮಂಡಳಿಯಾಗಲಿ, ಪೋಲಿಸರಾಗಲಿ, ಸರ್ಕಾರವಾಗಲಿ ಏನೂ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಅದೆಲ್ಲ ಪ್ರೈವೇಟ್ ಮ್ಯಾಟರು. ನಮ್ಮ ಜಾಗ, ನಮ್ಮ ದುಡ್ಡು, ನಮ್ಮ ನಂಬಿಕೆ. ಫ್ರೀಡಂ ಆಫ್ ರಿಲೀಜನ್ ಧುತ್ತೆಂದು ಹಾಜರಾಗಿ ಬಿಡುತ್ತದೆ. ಬೋಧಿಸುವ ಸ್ಥಳದಲ್ಲಿ ಬೋಳಿಸಲು ನಿಂತಿರುವುದು ವಿಪರ್ಯಾಸವೇ ಸರಿ. ಈ ಬಗ್ಗೆ ತುಂಬಾ ಸಲ ಬರೆದಾಯ್ತು. ರಾಯರ ಕತ್ತೆ ಕುದುರೆ ಆಗುವುದೇ ಇಲ್ಲ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top