
ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮ ವ್ಯಾಪ್ತಿಯ ಆಳಕ್ಕೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಅನಧಿಕೃತವಾಗಿ ಅಂಡಿಗುಂಡಿ ಖಾಸಗಿ ಶಾಲೆಯೊಂದನ್ನು ನಡೆಸುತ್ತಿರುವುದು ಬೆಳಕಿಗೆ ಬಂದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇಲ್ಲಿನ ರಹ್ಮಾನಿಯ ಮಸ್ಜಿದ್ ಹೆಸರಿನಲ್ಲಿ ಎಲ್.ಕೆ.ಜಿ (LKG) ಮತ್ತು ಯು.ಕೆ.ಜಿ (UKG) ತರಗತಿಗಳನ್ನು ನಡೆಸಲು ಮಾತ್ರ ಅನುಮತಿ ಪಡೆದುಕೊಂಡು, ಪ್ರಸ್ತುತ ನಿಯಮ ಬಾಹಿರವಾಗಿ ಬ್ರೈಟ್ ಆಂಗ್ಲ ಮಾಧ್ಯಮ ಶಾಲೆ ಎಂಬ ಹೆಸರಿನಲ್ಲಿ ಪೂರ್ಣ ಪ್ರಮಾಣದ ಶಾಲೆಯನ್ನು ನಡೆಸಲಾಗುತ್ತಿದೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಸದರಿ ಸಂಸ್ಥೆಯು ಬೆಳ್ತಂಗಡಿ ತಾಲೂಕಿನಲ್ಲಿ ಕೇವಲ ಪೂರ್ವ ಪ್ರಾಥಮಿಕ (LKG, UKG) ತರಗತಿಗಳಿಗೆ ಮಾತ್ರ ಪರವಾನಗಿ ಹೊಂದಿದೆ. ಆದರೆ, ಯಾವುದೇ ಕಾನೂನಾತ್ಮಕ ಅನುಮತಿ ಅಥವಾ ಶಿಕ್ಷಣ ಇಲಾಖೆಯ ಮಾನ್ಯತೆ ಇಲ್ಲದೆಯೇ ನಿಯಮ ಬಾಹಿರವಾಗಿ ಒಂದನೇ ತರಗತಿ (1st Standard) ಯನ್ನು ಆರಂಭಿಸಿ ಮುನ್ನಡೆಸಲಾಗುತ್ತಿದೆ. ಈ ಕುರಿತು ಜವಾಬ್ದಾರಿಯುತ ಸಾರ್ವಜನಿಕರು ಸೂಕ್ತ ದಾಖಲೆಗಳ ಸಮೇತ ಶಿಕ್ಷಣ ಇಲಾಖೆಗೆ ಹಲವು ಬಾರಿ ದೂರು ನೀಡಿದ್ದರೂ, ಇಲಾಖೆಯು ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದೆ ಮೌನಕ್ಕೆ ಶರಣಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳ ಒಳ ಒಪ್ಪಂದದ ಬಗ್ಗೆ ಶಂಕೆ ಇದ್ದು ಸಾರ್ವಜನಿಕರು ಮತ್ತು ಪೋಷಕರು ಲಿಖಿತ ದಾಖಲೆಗಳೊಂದಿಗೆ ದೂರು ನೀಡಿದ್ದರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಗೊರಕೆ ಹೊಡೆಯುತ್ತಾ ಕುಳಿತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅನಧಿಕೃತ ಶಾಲೆಯ ಆಡಳಿತ ಮಂಡಳಿಯೊಂದಿಗೆ ಅಧಿಕಾರಿಗಳು ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಸಾರ್ವಜನಿಕರು ಬಹಿರಂಗವಾಗಿ ಶಂಕೆ ವ್ಯಕ್ತಪಡಿಸುತ್ತಿದ್ದಾರೆ.

ಈ ಅಕ್ರಮ ದಂಧೆಯ ಪರಾಕಾಷ್ಠೆ ಎಂಬಂತೆ, ನಿಯಮ ಬಾಹಿರವಾಗಿ ನಡೆಯುತ್ತಿರುವ ಈ ಶಾಲೆಯಿಂದ ತಮ್ಮ ಮಕ್ಕಳನ್ನು ಬಿಡಿಸಿ, ಬೇರೆ ಶಾಲೆಗೆ ಸೇರಿಸಲು ಪೋಷಕರು ವರ್ಗಾವಣೆ ಪತ್ರ (Transfer Certificate – TC) ಕೇಳಿದಾಗ ಶಾಲೆಯ ದೊಡ್ಡ ವಂಚನೆ ಬಯಲಾಗಿದೆ.
ಅಳಕ್ಕೆ ಬ್ರೈಟ್ ಶಾಲೆಗೆ ಟಿಸಿ ನೀಡುವ ಅಧಿಕಾರವಿಲ್ಲದ ಕಾರಣ, ಪೋಷಕರ ಕಣ್ಣಿಗೆ ಮಣ್ಣೆರಚಲು ಮಂಗಳೂರು ತಾಲೂಕಿನ ಗುರುಪುರ ವ್ಯಾಪ್ತಿಯ ‘ಬಲ್ಮಿ ಆಂಗ್ಲ ಮಾಧ್ಯಮ ಶಾಲೆ, ತೆಂಕ ಉಳಿಪಾಡಿ, ಗುರುಪುರ ಹೆಸರಿನಲ್ಲಿ ವರ್ಗಾವಣೆ ಪತ್ರಗಳನ್ನು ವಿತರಿಸಲಾಗಿದೆ. ಬ್ರೈಟ್ ಶಾಲೆ ಇರುವ ಸ್ಥಳಕ್ಕೂ ಮತ್ತು ಟಿಸಿ ನೀಡಿರುವ ಬಲ್ಮಿ ಶಾಲೆಗೂ ಬರೋಬ್ಬರಿ 60 ಕಿಲೋಮೀಟರ್ ದೂರವಿದ್ದು ಆ ಶಾಲೆಯ ಮುಖವನ್ನೇ ನೋಡದ, ಅಲ್ಲಿ ಕಲಿಯದ ಮಕ್ಕಳಿಗೆ ಬೇರೆ ತಾಲೂಕಿನ ಶಾಲೆಯಿಂದ ಟಿಸಿ ನೀಡಿರುವುದು ಶಿಕ್ಷಣ ಹಕ್ಕು ಕಾಯ್ದೆ (RTE ನಿಯಮ) ಮತ್ತು ಸರ್ಕಾರದ ನಿಯಮಗಳ ಗಂಭೀರ ಹಾಗೂ ಸ್ಪಷ್ಟ ಉಲ್ಲಂಘನೆಯಾಗಿದೆ.

ಒಂದು ತಾಲೂಕಿನ ಅನಧಿಕೃತ ಶಾಲೆಯ ಮಕ್ಕಳಿಗೆ, ಇನ್ನೊಂದು ತಾಲೂಕಿನ ದೂರದ ಶಾಲೆಯು ವರ್ಗಾವಣೆ ಪತ್ರ ನೀಡುತ್ತಿರುವುದು ಶಿಕ್ಷಣ ವ್ಯವಸ್ಥೆಯ ಲೂಟಿಗೆ ಹಿಡಿದ ಕನ್ನಡಿಯಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಪೋಷಕರು ಈ ಕೆಳಗಿನ ಕ್ರಮಗಳಿಗೆ ತಕ್ಷಣವೇ ಆಗ್ರಹಿಸಿದ್ದಾರೆ.

ಅನಧಿಕೃತವಾಗಿ ಟಿಸಿ ವಿತರಿಸಿ ಅಕ್ರಮ ದಂಧೆಗೆ ಸಾಥ್ ನೀಡಿರುವ ಮಂಗಳೂರು ತಾಲೂಕಿನ ಗುರುಪುರದ ಬಲ್ಮಿ ಆಂಗ್ಲ ಮಾಧ್ಯಮ ಶಾಲೆಯ ಅನುಮತಿಯನ್ನು ತಕ್ಷಣವೇ ರದ್ದುಗೊಳಿಸಬೇಕು ಮತ್ತು
ನಿಯಮ ಬಾಹಿರವಾಗಿ ಶಾಲೆ ನಡೆಸುತ್ತಿರುವ ಬ್ರೈಟ್ ಆಂಗ್ಲ ಮಾಧ್ಯಮ ಶಾಲೆಯ ಮಾಲೀಕರು/ಖಾಸಗಿ ವ್ಯಕ್ತಿಗಳ ಮೇಲೆ ಮತ್ತು ಅವರಿಗೆ ಸಹಕರಿಸಿದ ಬಲ್ಮಿ ಶಾಲೆಯ ಆಡಳಿತ ಮಂಡಳಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಇಷ್ಟೆಲ್ಲಾ
ಸಾರ್ವಜನಿಕರ ದೂರುಗಳಿದ್ದರೂ ಕ್ರಮ ಕೈಗೊಳ್ಳದ ಬೆಳ್ತಂಗಡಿ ತಾಲೂಕಿನ ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿರುದ್ಧ ಇಲಾಖಾ ಮಟ್ಟದ ಶಿಸ್ತುಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಪೋಷಕರನ್ನು ಮತ್ತು ಸಾರ್ವಜನಿಕರನ್ನು ಸಂಘಟಿಸಿ ಶಿಕ್ಷಣ ಇಲಾಖೆಯ ಕಚೇರಿ ಎದುರು ತೀವ್ರ ಸ್ವರೂಪದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.