
ರಾಜ್ಯದ ನಂಬರ್ ವನ್ ದೇವರು ಸುಬ್ರಹ್ಮಣ್ಯನ ಊರಿನಲ್ಲಿ ಕೃಷಿ ಭೂಮಿಯಲ್ಲಿ ಯಾವುದೇ ಲೈಸೆನ್ಸ್ ಪಡೆಯದೆ, ಭೂ ಪರಿವರ್ತನೆ ಮಾಡದೆ, ಕಂದಾಯ ಇಲಾಖೆಯ, ಪಂಚಾಯತ್ ರಾಜ್ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಅಂಡಿಗುಂಡಿ ಅಂಗಡಿಗಳನ್ನು ನಿರ್ಮಿಸಲಾಗಿದೆ ಎಂದು ತಿಳಿದುಬಂದಿದೆ. ಈ ಎಲ್ಲಾ ಅಂಡಿಗುಂಡಿ ಅಂಗಡಿಗಳೂ ಅಮಾಯಕ ಭಕ್ತರನ್ನು ಲೂಟುವ ಲೂಟೀಸ್ ಸೆಂಟರ್ ಗಳೇ ಆಗಿವೆ. ಇವರನ್ನೆಲ್ಲ ಕೇಳುವವರೇ ಇಲ್ಲ. ಯಾಕೆಂದರೆ ಶಿವನ ಮಗನ ನಿತ್ಯ ಜಾತ್ರೆಯ ಗೌಜಿಯಲ್ಲಿ ಇದನ್ನೆಲ್ಲ ನೋಡಲು, ಕೇಳಲು ಯಾರಿಗೂ ಪುರುಸೊತ್ತೂ ಇಲ್ಲದಾಗಿದೆ.

ಅಲ್ಲಿ ಸುಬ್ರಹ್ಮಣ್ಯ ಗ್ರಾಮದ ಆದಿ ಸುಬ್ರಹ್ಮಣ್ಯ ಬಳಿ ಸರ್ವೇ ನಂಬ್ರ 82/5 ರ ಕೃಷಿ ಭೂಮಿಯಲ್ಲಿ ಸುಮಾರು 33 ಅಂಡಿಗುಂಡಿ ಅಂಗಡಿಗಳನ್ನು ನಿರ್ಮಿಸಿ ಬಾಡಿಗೆಗೆ ಬಿಡಲಾಗಿದೆ. ಈ ಮೂವತ್ಮೂರು ಅಂಗಡಿಗಳ ಅಡಿ ಸ್ಥಳವೂ ಕೃಷಿ ಭೂಮಿಯಲ್ಲಿ ಬರುತ್ತಿದ್ದು ಸದ್ರಿ ಕೃಷಿ ಭೂಮಿಯನ್ನು ಯಾವುದೇ ಕೃಷಿಯೇತರ ಉದ್ದೇಶಕ್ಕಾಗಿ ಪರಿವರ್ತನೆ ಮಾಡದೆ ಹಾಗೆಯೇ ಅಂಗಡಿ ಎಬ್ಬಿಸಲಾಗಿದೆ. ಕೃಷಿ ಭೂಮಿ ಯಾವುದೇ ಪರಿವರ್ತನೆ ಆಗದೆ 9/11 ಮಾಡಲು ಪಂಚಾಯ್ತಿಗೆ ಬರಲ್ಲ. 9/11 ಆಗದೆ ಪಂಚಾಯ್ತಿ ಪರ್ಮಿಷನ್ ಸಿಗಲ್ಲ. ಪರ್ಮಿಷನ್ ಆಗದೆ ತೆರಿಗೆ ಹಾಕುವ ಹಾಗಿಲ್ಲ. ಟೋಟಲಿಯಾಗಿ ಹೇಳುವುದಾದರೆ ಈ ಮೂವತ್ಮೂರೂ ಅನಧಿಕೃತ ಅಂಗಡಿಗಳೂ ಜೆಸಿಬಿ ಬಾಯಿಗೆ ಡೈರೆಕ್ಟ್ ಬೀಳುವಂತದ್ದೇ. ಅದರಲ್ಲಿ ಸಂಶಯವೇ ಇಲ್ಲ. ಆದರೆ ಜೆಸಿಬಿ ತರುವವರು ಯಾರು?

ಹಾಗೆಂದು ಈ ಆದಿ ಸುಬ್ರಹ್ಮಣ್ಯದ 33 ಅಂಗಡಿಗಳೂ ಪಂಚಾಯ್ತಿಗೆ ಒಂದ್ರೂಪಾಯಿನೂ ತೆರಿಗೆ ಕಟ್ಟಿದ ಬಗ್ಗೆ ಉದಾಹರಣೆಗಳು ಸಿಗಲ್ಲ. ಇದನ್ನೆಲ್ಲ ಕೇಳಲು ಪಂಚಾಯ್ತಿಗೂ ಬೆಟ್ರಿ ಇಲ್ಲ, ಯಾಕೆಂದರೆ ಈ ಎಲ್ಲಾ ಅಂಗಡಿಗಳೂ ಖಾಸಗೀ ಸ್ಥಳದಲ್ಲಿ ಇದೆ. ಈ ಬಗ್ಗೆ ಪಂಚಾಯ್ತಿ ಪಿಡಿಒಗೆ, ತಾಲೂಕು ಪಂಚಾಯಿತಿ ಸಿಇಒಗೆ ತುಂಬಾ ಸಲ ಲಿಖಿತ ದೂರು ಅರ್ಜಿ ಕೊಟ್ಟರೂ ಅರ್ಜಿ ಕಸದ ಬುಟ್ಟಿಯ ಹೊಟ್ಟೆ ತುಂಬಿಸಿದ್ದು ಬಿಟ್ಟರೆ ಬೇರೇನೂ ಪ್ರತಿಫಲ ಸಿಕ್ಕಿಲ್ಲ. ಇನ್ನು ಕಡಬ ತಹಶೀಲ್ದಾರ, ಅಸಿಸ್ಟೆಂಟ್ ಕಮಿಷನರ, ಜಿಲ್ಲಾ ಕಲೆಕ್ಟರ ಮುಂತಾದ ದೊಡ್ಡ ದೊಡ್ಡ ಅಧಿಕಾರಿ ವರ್ಗದವರಿಗೂ ದೂರು ಸಲ್ಲಿಕೆ ಆದರೂ ಯಾವುದೇ ಕ್ರಮ ಆಗಿಲ್ಲ. ಸದ್ರಿ ಅಂಗಡಿಗಳ ವಾನರ್ ಪ್ರತೀ ಅಂಗಡಿಗಳಿಂದ ಲಕ್ಷಾಂತರ ರೂಪಾಯಿ ಅಡ್ವಾನ್ಸ್ ಮತ್ತು ತಿಂಗಳಿಗೆ ಇಪ್ಪತ್ತೈದರಿಂದ ಐವತ್ತು ಸಾವ್ರದವರೆಗೆ ಬಾಡಿಗೆ ಪಡೆದು ಮಾಳಿಗೆ ಹಾಕುತ್ತಿದ್ದಾರೆಂದು ತಿಳಿದುಬಂದಿದೆ. ವಿಥೌಟ್ ಪರ್ಮಿಷನ್ ಕರೆಂಟ್ ಹೇಗೆ ಕೊಟ್ಟಿದ್ದಾರೆ ಮಾರಾಯ್ರೆ ಇವರಿಗೆ?

ಹಾಗೆಂದು ಓ ಮೊನ್ನೆ ತಾನೇ ಸುಬ್ರಹ್ಮಣ್ಯದಲ್ಲಿ ಅಧಿಕೃತವಾಗಿರುವ ಅನಧಿಕೃತ ಪೂಜೆಗಳ ಬಗ್ಗೆ ಬರೆದು ಆ ಪೂಜೆಗಳು ಎಲ್ಲೆಲ್ಲಿ ನಡೆಯುತ್ತಿದೆ ಎಂದೂ ವ್ಯವಸ್ಥೆಯ ಗಮನ ಸೆಳೆದಿದ್ದೆವು. ಅಂತಹ ಅನಧಿಕೃತ ಪೂಜೆಗಳು ಈ ಅನಧಿಕೃತ ಅಂಗಡಿಗಳ ಸಾಲಿನಲ್ಲೂ ನಡೆಯುತ್ತಿದೆ ಎಂದು ತಿಳಿದುಬಂದಿದೆ. ದೇವಸ್ಥಾನದ ಸರ್ಪ ಸಂಸ್ಕಾರಕ್ಕೆ ಎರಡು ದಿನ ಬೇಕೆಂದೂ, ಆಶ್ಲೇಷ ಬಲಿ ಲೇಟ್ ಆಗುತ್ತೆ ಎಂದೂ, ನಾವು ಸಿಂಪಲ್ಲಾಗಿ ತತ್ಕಾಲ್ ಪೂಜೆ ಮಾಡುತ್ತೇವೆ ಎಂದೂ, ಪ್ರತಿಫಲ ಎಲ್ಲಾ ಕೂಡ ಒಂದೇ ಎಂದು ಅಮಾಯಕ ಭಕ್ತರನ್ನು ಮಂಗ ಮಾಡಿ ಇದೇ ಅನಧಿಕೃತ ಅಂಗಡಿಗಳಲ್ಲಿ ಕೂರಿಸಿ ಅಂಡಿಗುಂಡಿ ಪೂಜೆ ಮುಗಿಸಿ ಲೂಟಲಾಗುತ್ತಿದೆ ಎಂದು ತಿಳಿದುಬಂದಿದೆ. ಆದಿಯಲ್ಲಿ ನಡೆಯುವ ಈ ಎಲ್ಲಾ ಅನಧಿಕೃತ ವೈವಾಟ್ ಗಳಿಗೆ ಸುಬ್ರಹ್ಮಣ್ಯ ಪಿಡಿಒ ನೇರ ಕಾರಣರಾಗಿದ್ದು ಲೈಸೆನ್ಸ್ ಇಲ್ಲದೆ, ತೆರಿಗೆ ವಸೂಲಿ ಮಾಡದೆ, ರಾಜಾರೋಷವಾಗಿ ಅಂಗಡಿ ಓಪನ್ ಮಾಡಿ ವೈವಾಟ್ ನಡೆಸುತ್ತಿದ್ದಾರೆಂದರೆ ಇದಕ್ಕೆ ಜನ ಯಾರು? ಪಿಡಿಒ ಯಾಕೆ ಒಂದ್ರೌಂಡು ಆದಿಗೆ ಹೋಗಲ್ಲ, ಈ ಬಗ್ಗೆ ವಿಚಾರಿಸಲ್ಲ?
