
ಕಡಬದಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಸೀನಿಯರ್ ಕಾಂಗ್ರೇಸ್ ನಾಯಕರೊಬ್ಬರನ್ನು ಪತ್ರಕರ್ತರು ಕಾರಣಗಳೇ ಇಲ್ಲದೆ ತರಾಟೆಗೆತ್ತಿಕ್ಕೊಂಡು ಅವಮಾನಿಸಿದ ಘಟನೆ ನಡೆದಿದೆ. ಜೊತೆಗಿದ್ದ ಇತರೇ ಕಾಂಗ್ರೇಸಿಗರು ಕೂಡ ಸುಮ್ಮನಿದ್ದದ್ದೇ ಹೊರತು ಗುರ್ರ್ ಅಂತ ಹೇಳಲೇ ಇಲ್ಲ.
ಮೊನ್ನೆ ಕಡಬದಲ್ಲಿ ಕಾಂಗ್ರೇಸ್ ನಾಯಕರು ಕೋರಿಯಾರ್ ಸಂಕದ ಬಗ್ಗೆ ಮಾತಾಡಲು ಪತ್ರಿಕಾ ಗೋಷ್ಠಿ ಕರೆದಿದ್ದರು. ಕೋರಿಯಾರ್ ಸಂಕಕ್ಕೆ ಮೂವತ್ತಾರು ಕೋಟಿ ಬಿಡುಗಡೆ ಮಾಡಲಾದ ಬಗ್ಗೆ ಮಾಹಿತಿ ನೀಡುವ ಪತ್ರಿಕಾ ಗೋಷ್ಠಿ ಅದು. ಗೋಷ್ಠಿಯಲ್ಲಿ ಕಡಬ ಕಾಂಗ್ರೇಸಿನ ವರ್ಗೀಸ್, ರಾಮಕುಂಜದ ಕೃಷ್ಣಪ್ಪಣ್ಣ, ಬಾಲಕೃಷ್ಣ ಬಳ್ಳೇರಿ ಮತ್ತು ಕೆಲವು ಜ್ಯೂನಿಯರ್ ನಾಯಕರು ಹಾಜರಿದ್ದರು. ಗೋಷ್ಠಿಯಲ್ಲಿ ಕಡಬ ಕಾಂಗ್ರೇಸಿನ ಹಿರಿಯ ನಾಯಕ ಬಳ್ಳೇರಿ ಮಾತಾಡುತ್ತಾ ಸುಳ್ಯ ಶಾಸಕರನ್ನು ಟಾರ್ಗೆಟ್ ಮಾಡಿ ಸಂಕದ ಬಗ್ಗೆ ಕಡಬ ಪತ್ರಕರ್ತರು “ಯಾರೋ” ಹೇಳಿಕೆ ನೀಡಿರುವುದನ್ನು ಹಾಕಿದ್ದಾರೆ ಎಂದು ಹೇಳಿದ್ದರು. ಇದಕ್ಕೂ ಮೊದಲು ಸುಳ್ಯ ಶಾಸಕಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಕೋರಿಯಾರ್ ಸಂಕಕ್ಕೆ ಮೂವತ್ತು ಕೋಟಿ ಬಿಡುಗಡೆ ಆಗಿದೆ ಎಂದು ಹೇಳಿದ್ದರು. ಹಾಗೆ ಶಾಸಕರು ತಮ್ಮ ಗೋಷ್ಠಿಯಲ್ಲಿ ಕೊಟ್ಟಿದ್ದು ತಪ್ಪು ಮಾಹಿತಿ, ಕೊರಿಯಾರ್ ಸಂಕಕ್ಕೆ ಮೂವತ್ತಾರು ಕೋಟಿ ಬಿಡುಗಡೆ ಆಗಿದೆ ಎಂದು ಸಾರ್ವಜನಿಕರಿಗೆ ತಿಳಿಸಲು ಕಾಂಗ್ರೇಸಿಗರು ಈ ಪತ್ರಿಕಾಗೋಷ್ಠಿ ಕರೆದಿದ್ದು ಮತ್ತು ಒಬ್ಬ ವಿರೋಧ ಪಕ್ಷದ ನಾಯಕನಾಗಿದ್ದ ಕಾರಣ ಬಳ್ಳೇರಿ “ಯಾರೋ” ಹೇಳಿದ್ದನ್ನು ತಪ್ಪಾಗಿ ಪ್ರಕಟಿಸಿದ್ದೀರಿ ಎಂದು ಪತ್ರಕರ್ತರಿಗೆ ಹೇಳಿದ ಕಾರಣ ಗೋಷ್ಠಿಯಲ್ಲಿ ಬೆಂಕಿ ಹತ್ತಿಕೊಂಡಿತು.
ಹಾಗೆಂದು ಬಾಲಕೃಷ್ಣ ಬಳ್ಳೇರಿ ಕಡಬ ಕಾಂಗ್ರೇಸಿನ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸಿನ ಸೀನಿಯರ್ ಸಿಟಿಜನ್. ಬಳ್ಳೇರಿದ್ದು ಅನಾಮತ್ತು ನಲವತ್ತು ವರ್ಷಗಳ ಸಾರ್ವಜನಿಕ ಜೀವನ. ನಲವತ್ತು ವರ್ಷಗಳ ರಾಜಕೀಯ ಜರ್ನಿಯಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಓಬಿರಾಯನ ಕಾಲದ ಮಂಡಲ ಪಂಚಾಯ್ತಿ ಸದಸ್ಯನಾಗಿ, ಗ್ರಾಮಪಂಚಾಯತ್ ಅಧ್ಯಕ್ಷನಾಗಿ, ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಯಾಗಿ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ, ರಾಜ್ಯದ ನಂಬರ್ ವನ್ ದೇವರ ಆಲಯದ ಟ್ರಸ್ಟಿಯಾಗಿ, ಉಮಾ ಮಹೇಶ್ವರ ದೇವಸ್ಥಾನದ ಅಧ್ಯಕ್ಷನಾಗಿ ಹಾಗೂ ಇತರೇ ಅನೇಕ ದೇವಸ್ಥಾನಗಳ ಜೀರ್ಣೋದ್ಧಾರ ಸಮಿತಿಗಳ ಸದಸ್ಯನಾಗಿ, ಬ್ರಹ್ಮಕಲಶೋತ್ಸವಗಳ ಮುಂದಾಳುವಾಗಿ ಹಾಗೂ ಇನ್ನೂ ಅನೇಕಾನೇಕ ಸಂಘಸಂಸ್ಥೆಗಳ, ಸಾರ್ವಜನಿಕ ಸಮಿತಿಗಳ, ಉತ್ಸವ ಸಮಿತಿಗಳ ಪದಾಧಿಕಾರಿಯಾಗಿ ಕಳೆದ ನಲವತ್ತು ವರ್ಷಗಳಿಂದ ಸಮಾಜದ ವಿವಿಧ ಸ್ತರಗಳಲ್ಲಿ ಕೆಲಸ ಮಾಡಿದವರು, ಪ್ರತಿಫಲ ಒದಗಿಸಿ ಕೊಟ್ಟವರು ಮತ್ತು ಅಜಾತಶತ್ರುವಾಗಿ ಬದುಕಿ ಕಡಬ ಕಾಂಗ್ರೇಸಿನಲ್ಲಿ ಹೆಮ್ಮರವಾಗಿ ಬೆಳೆದವರು. ಕಡಬ ತಾಲೂಕು ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಮಂತ್ರಿ ಶ್ರೀಕಂಠಯ್ಯ ಬಳಿ ಕಾಡಿಬೇಡಿ, ಅಂಗಲಾಚಿ, ಅತ್ತು ಗೋಗರೆದು ಕಡಬ ತಾಲೂಕು ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಶಾಸಕಿ ಮಟ್ಟಿಗೆ ಒಬ್ಬ ಪ್ರಬಲ ವಿರೋಧ ಪಕ್ಷದ ನಾಯಕನಾಗಿ ಮತ್ತು ಪ್ರಸಕ್ತ ಆಡಳಿತ ಪಕ್ಷದ ಪ್ರಮುಖ ನಾಯಕನಾಗಿ ಪತ್ರಿಕಾ ಗೋಷ್ಠಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ “ಯಾರೋ ಹೇಳಿದ್ದನ್ನು ಪ್ರಕಟಿಸಿದ್ದೀರಿ” ಎಂದು ಹೇಳಿದ್ದರೆ ಅದನ್ನು ಅಷ್ಟು ದೊಡ್ಡ ರಾಮಾಯಣ ಮಾಡಿ ಬಳ್ಳೇರಿಯಂತಹ ಸೀನಿಯರ್ ನಾಯಕನನ್ನು ಅವಮಾನ ಮಾಡುವ ಜರೂರತ್ತಾದರೂ ಏನಿತ್ತು ಎಂಬುದು ಸಾರ್ವಜನಿಕರ ಪ್ರಶ್ನೆ. “ಹಿರಿಯ ಕಾಂಗ್ರೆಸ್ ನಾಯಕನ ಎಡವಟ್ಟು” ಎಂಬ ಶೀರ್ಷಿಕೆ ಕೊಟ್ಟು ಪತ್ರಿಕೆಗಳು ಪಬ್ಲಿಸಿಟಿ ಮಾಡಿದ ಉದ್ದೇಶವಾದರೂ ಏನಿತ್ತು ಎಂಬುದು ಇನ್ನೊಂದು ಪ್ರಶ್ನೆ. ನಿಜವಾಗಿಯೂ ಬಳ್ಳೇರಿ ಮಾಡಿದ ಎಡವಟ್ಟಾದರೂ ಏನು? ಶಾಸಕಿ ಕೊಟ್ಟ ಮಾಹಿತಿ ತಪ್ಪು, ಅವರ ಹೆಸರೇಳದೆ “ಯಾರೋ” ಎಂದು ಹೇಳಿದ್ದು ಎಡವಟ್ಟಾ? ಹೇಮನಾಥ ಶೆಟ್ಟಿಯ ಪತ್ರಿಕಾ ಗೋಷ್ಠಿಯಲ್ಲಿ ಎಡವಟ್ಟಾದರೆ ವಾಯ್ಸ್ ರೇಸ್ ಆಗುತ್ತಾ? ಆಚೆ ರಮಾನಾಥ್ ರೈ ಗೋಷ್ಠಿಯಲ್ಲಿ? ಅಭಯಚಂದ್ರ ಗೋಷ್ಠಿಯಲ್ಲಿ? ರಾಜೇಂದ್ರ ಕುಮಾರ್ ಗೋಷ್ಠಿಯಲ್ಲಿ? ಸುಳ್ಯದ ವೆಂಕಪ್ಪ ಗೌಡರ ಗೋಷ್ಠಿಯಲ್ಲಿ ಮಾತಾಡಕ್ಕೆ ಬಿಡ್ತಾರಾ?
ಹಾಗೆ ಕಡಬ ಕಾಂಗ್ರೇಸಿಗರು ಕರೆದ ಪತ್ರಿಕಾಗೋಷ್ಠಿಯಲ್ಲಿ ಬಳ್ಳೇರಿ “ಯಾರೋ”ಎಂದು ಹೇಳಿದ್ದಕ್ಕೆ ಬೆಂಕಿ ಹತ್ತಿಕೊಂಡಿತ್ತಲ್ಲ. ಪತ್ರಕರ್ತರು ಭುಗಿಲೆದ್ದೀದ್ದಾರೆ. ಬಳ್ಳೇರಿ ವಿರುದ್ಧ 125 ಡಿಸಿಬಲ್ ನಲ್ಲಿ ಬೊಬ್ಬೆ ಹಾಕಿದ್ದಾರೆ. ಪ್ರೆಸ್ ಮೀಟ್ ನಲ್ಲಿ ಮಾತಾಡುವಾಗ ಹೇಗೆ ಮಾತಾಡಬೇಕೆಂದು ಗೊತ್ತಿರಬೇಕು, ಮಾತಾಡ್ಲಿಕ್ಕೆ ಅವಕಾಶ ಸಿಕ್ಕಿತೆಂದು ಏನೇನೋ ಮಾತಾಡುವುದಲ್ಲ, ಸರಿಯಾಗಿ ಮಾಹಿತಿ ಇದ್ದವರನ್ನು ಮಾತ್ರ ಗೋಷ್ಠಿಯಲ್ಲಿ ಕೂರಿಸಿ ಎಂದೆಲ್ಲ ಬಳ್ಳೇರಿ ವಿರುದ್ಧ ಹರಿಹಾಯ್ದಿದ್ದಾರೆ. ಬಳ್ಳೇರಿಗೆ ಈ ಬಗ್ಗೆ ಸ್ಪಷ್ಟನೆ ಕೊಡಲೂ ಅವಕಾಶ ಕೊಡದೆ, ತಾನು ಆಡಿದ ಮಾತಿನ ಬಗ್ಗೆ ಪತ್ರಕರ್ತರಿಗೆ ಮನವರಿಕೆ ಮಾಡಲೂ ಬಿಡದೆ ಸುಮ್ಮನಿರಿಸಲಾಗುತ್ತದೆ. ಹಾಗಾದರೆ ಬಳ್ಳೇರಿಗೆ ಒಂದು ಪತ್ರಿಕಾಗೋಷ್ಠಿಯಲ್ಲಿ ಹೇಗೆ ಮಾತಾಡಬೇಕು ಎಂದು ಗೊತ್ತಿಲ್ವಾ? ಬಳ್ಳೇರಿದ್ದು ಇದು ಫಸ್ಟ್ ಪತ್ರಿಕಾಗೋಷ್ಠಿಯಾ? ಬಳ್ಳೇರಿಗೆ ಈ ಪ್ರೆಸ್ ಮೀಟ್ ನಲ್ಲಿ ಮಾತ್ರ ಮಾತಾಡಲು ಅವಕಾಶ ಸಿಕ್ಕಿದ್ದಾ? ಹಾಗಾದರೆ ನಲವತ್ತು ವರ್ಷಗಳ ಸಾರ್ವಜನಿಕ ಜೀವನ ಸುಮ್ಮನೆ ದಂಡಯಾತ್ರೆಯಾ? ಕಡಬದ ನನ್ನ ಪ್ರೀತಿಪಾತ್ರ ಪತ್ರಕರ್ತರ ಬಳಿ ಇದಕ್ಕೆಲ್ಲ ಉತ್ತರ ಇದೆಯಾ?
ಪತ್ರಿಕಾ ರಂಗ ಅಂದರೆ ಪ್ರಜಾಪ್ರಭುತ್ವ ಎಂಬ ಕತ್ತೆಯ ಬಾಲ ಇದ್ದ ಹಾಗೆ. ಸುಮ್ಮನೆ ಕತ್ತೆಯ ಬಾಡಿ ಮೇಲೆ ರೋಗ ಹರಡುವ ಸೊಳ್ಳೆ, ಕ್ರಿಮಿಕೀಟಗಳು, ನೊಣ ಮುಂತಾದ ಯೂಸ್ ಲೆಸ್ ಗಳನ್ನು ಓಡಿಸಲು ಮಾತ್ರ ಯೂಸ್ ಆಗುವಂತದ್ದು. ಬಾಲ ಇಲ್ಲದಿದ್ದರೂ ಕತ್ತೆ ನಡೆಯುತ್ತೆ. ಆದರೆ ನಾವು ಮಾತ್ರ ಪತ್ರಿಕಾ ರಂಗ ಅಂದರೆ ಪ್ರಜಾಪ್ರಭುತ್ವದಲ್ಲಿ ಆನೆ ಕುದುರೆ ಸಿಂಹ ಪಿಲಿ ಎಂದೆಲ್ಲಾ ಮಿಸ್ ಅಂಡರ್ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೇವೆ. ಅದಕ್ಕೆಂದೇ ಪತ್ರಿಕೆಗಳನ್ನು ಹೊತ್ತುಕೊಂಡಂತೆ, ಟಿವಿಗಳನ್ನು, ವೆಬ್ ಸೈಟ್ ಗಳನ್ನು ಹೊತ್ತುಕೊಂಡಂತೆ ವರ್ತಿಸುತ್ತಿದ್ದೇವೆ. ರಂಗ ಎಸ್ಸೆಸ್ಸೆಲ್ಸಿ ಪತ್ರಕರ್ತರೇ ತುಂಬಿರುವ ಪತ್ರಿಕಾರಂಗವನ್ನು ಸಮಾಜ ಇಲ್ಲಿ ತನಕವೂ ಸಹಿಸಿಕೊಂಡು ಉಳಿಸಿಕೊಂಡಿದೆಯಲ್ಲ ಎಂಬುದನ್ನೆ ನೆನೆದು ಕೊಂಡು ಸಮಾಜದೊಂದಿಗೆ ಸಮಾನ ಮನಸ್ಕರಾಗಿ ನಡೆಯುವುದು ಬಿಟ್ಟು ಸಮಾಜದ ಮೇಲೆಯೇ ಏರಿ ಹೋದರೆ ಇಂದಿನ ದಿನಗಳಲ್ಲಿ ಯುದ್ಧ ಮಾಡಲು ನಮ್ಮ ಪೊಟ್ಟು ಪೆನ್ನು ಸಾಲದು. ಹಾಗೆಂದು ನಾನು ಹೀಗೆಲ್ಲ ಪತ್ರಕರ್ತರಿಗೆ ಬರೆದು ಶಾಸಕಾಂಗದ ಪರ ನಿಂತೆ ಎಂದು ನನ್ನ ಕಡಬದ ಪ್ರೀತಿ ಪಾತ್ರ ಪತ್ರಕರ್ತ ಮಿತ್ರರಿಗೆ ನನ್ನ ಮೇಲೆ ಕೆಂಡದಂತಹ ಕೋಪ ಬಂದಿರಬಹುದು, ಭೂತದ ಬಾಯಲ್ಲಿ ಭಗವದ್ಗೀತೆ ಎಂದು ಹೇಳಬಹುದು. ಆದರೆ ರಿಯಾಲಿಟಿ ಏನು ಎಂಬುದನ್ನು ಅವರಿಗೆ ಮನವರಿಕೆ ಕೊಡುವ ನನ್ನ ಚಿಕ್ಕ ಪ್ರಯತ್ನ. ನಾವು ದನಗಳ್ಳರ ಪತ್ರಿಕಾಗೋಷ್ಠಿಯಲ್ಲಿ ಹಾಜರಿರುತ್ತೇವೆ, ಕೋಟಿ ಕೋಟಿ ಮುಳುಗಿಸಿದವರ ಗೋಷ್ಠಿಯಲ್ಲೂ ಹೋಗಿ ಕೂರುತ್ತೇವೆ. ಈಗ ಬಳ್ಳೇರಿ ದೊಡ್ಡ ಮಟ್ಟದಲ್ಲಿ ಮುಳುಗಿಸಿ, ಭ್ರಷ್ಟಾಚಾರ ನಡೆಸಿ ಬಂದು ಗೋಷ್ಠಿಯಲ್ಲಿ ಕುಂತಿದ್ದರೆ ಕ್ವಶ್ಚನ್ ಮಾಡುವ ಹಕ್ಕು ನಮಗಿದೆ. ಆದರೆ ಏನೂ ಮಾಡದ ಹಿರಿ ಜೀವ ಬಳೇರಿಯನ್ನು ಮೊನ್ನೆಯ ಗೋಷ್ಠಿಯಲ್ಲಿ ನಡೆಸಿಕೊಂಡ ರೀತಿ ಮಾತ್ರ ಉಂಟಲ್ಲ ಶೇಮ್ ಶೇಮ್. ಪತ್ರಕರ್ತರು ಹಾಗೆಲ್ಲ ಮಾತಾಡುವ ಹಾಗಿಲ್ಲ. (ಕಡಬದ ಅಷ್ಟೂ ಪತ್ರಕರ್ತರ ಕ್ಷಮೆ ಇರಲಿ)